
ಬೆಂಗಳೂರು: ಕರ್ನಾಟಕ ಸರ್ಕಾರದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಕಟ್ಟಡದಲ್ಲಿ ಬಾಂಬ್ ಸ್ಫೋಟಗೊಂಡಂತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆಯ ವಲಸೆ ಕಾರ್ಮಿಕ ಅಲಿ (25) ಬಂಧಿತ ಆರೋಪಿ. ಈತ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಪೈಪ್ ಫಿಟ್ಟರ್ ಆಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಮಂಗಳವಾರ ಬೆಳಿಗ್ಗೆ ‘jnx__king__h_g’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ದೃಶ್ಯಾವಳಿಯಲ್ಲಿ ಮೊದಲಿಗೆ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ನಿಂತು ಹೊರಭಾಗದ ನೈಜ ದೃಶ್ಯಗಳನ್ನ ತೋರಿಸಲಾಗಿತ್ತು. ತದನಂತರ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿದಂತೆ ಸುಳ್ಳು ದೃಶ್ಯಾವಳಿಯನ್ನ ಸೃಷ್ಟಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಾವಲು ಕಾರ್ಯಾಚರಣೆ ಸಮಯದಲ್ಲಿ ಈ ವಿಡಿಯೋ ಪೊಲೀಸರ ಗಮನಕ್ಕೆ ಬಂದಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ವಿಧಾನಸೌಧ ಠಾಣೆ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(1)(B) ಮತ್ತು 353(2)ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ವಿಡಿಯೋ ಪ್ರಕಟವಾದ ಖಾತೆಗೆ ಸಂಬಂಧಿಸಿದ ಸುಳಿವುಗಳನ್ನ ಆಧರಿಸಿ ಬೆಂಗಳೂರಿನಲ್ಲಿದ್ದ ಅಲಿಯನ್ನ ಬಂಧಿಸಲಾಗಿದೆ. ಕೃತ್ಯದ ಹಿಂದಿರುವ ಉದ್ದೇಶವೇನು, ವಿಡಿಯೋ ಸೃಷ್ಟಿಸುವುದರ ಹಿಂದೆ ಯಾರದ್ದಾದರೂ ಪಾತ್ರವಿದೆಯಾ? ಎಂಬುದನ್ನ ತಿಳಿಯಲು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
