
ಬೆಂಗಳೂರು: ರಾತ್ರಿ ನಿದ್ರೆಯಲ್ಲಿದ್ದಾಗ ಮೈಮೇಲೆ ಏನೋ ಹರಿದಾಡಿದ ಅನುಭವ… ಆಗಿದ್ದು ಅವರು ಅದನ್ನು ನಿರ್ಲಕ್ಷಿಸಿ ಇಲಿ ಇರಬಹುದು ಎಂದು ನಿದ್ರೆಗೆ ಜಾರಿದ ಅಣ್ಣ-ತಂಗಿ ಬೆಳಗಿನ ಜಾವ ಎದ್ದು ನೋಡಿದಾಗ ಕಾದಿತ್ತು ದಿಗಿಲುಗೊಳಿಸುವ ಆಘಾತ! ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿದ್ದ ನಾಗರ ಹಾವನ್ನು ಕಂಡು ಇಡೀ ಕುಟುಂಬವೇ ಬೆಚ್ಚಿಬಿದ್ದ ಘಟನೆ ನಗರದ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಬಾಗಲಗುಂಟೆಯ ಭೈರವೇಶ್ವರ ನಗರದ ನಿವಾಸವೊಂದರಲ್ಲಿ ಬುಧವಾರ ರಾತ್ರಿ ಕೊಠಡಿಯ ಕಿಟಕಿಯನ್ನು ತೆರೆದಿಟ್ಟು ಮಲಗಿದ್ದರೂ ಆ ಕ್ಷಣದಲ್ಲಿತ ಈ ಕಿಟಕಿಯ ಮೂಲಕ ಮನೆಯೊಳಗೆ ಹೊಕ್ಕ ನಾಗರ ಹಾವು, ಅಲ್ಲಿ ಮಲಗಿದ್ದ ಅಣ್ಣ ಮತ್ತು ತಂಗಿಯ ಹಾಸಿಗೆಯನ್ನೇ ತನ್ನ ತಾಣವಾಗಿಸಿಕೊಂಡಿದೆ. ರಾತ್ರಿ ಇಡೀ ರಾತ್ರಿ ಗಾಢ ನಿದ್ರೆಯಲ್ಲಿದ್ದ ಇಬ್ಬರ ಮೈಮೇಲೂ ಈ ವಿಷಪೂರಿತ ಸರ್ಪ ಹರಿದಾಡಿದೆ.
ಆದರೆ, ಕತ್ತಲೆಯಲ್ಲಿ ‘ಇಲಿ ಇರಬಹುದು’ ಎಂದು ಭಾವಿಸಿದ ಸಹೋದರ-ಸಹೋದರಿ ಅದನ್ನು ಗಂಭೀರವಾಗಿ ಪರಿಗಣಿಸದೆ ನಿದ್ರೆ ಮುಂದುವರಿಸಿದ್ದಾರೆ. ಬೆಳಗ್ಗೆ ಎದ್ದು ಹಾಸಿಗೆ ಸರಿಪಡಿಸುವಾಗ ದಿಂಬಿನ ಕೆಳಗಡೆ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿದೆ ಒಂದು ಕ್ಷಣ ಭಯಬೀತರಾದರು
ಉರಗ ರಕ್ಷಕನಿಂದ ಸಮಯೋಚಿತ ರಕ್ಷಣೆ: ದಿಂಬಿನ ಕೆಳಗೆ ಪ್ರತ್ಯಕ್ಷವಾದ ಹಾವನ್ನು ಕಂಡು ಗಾಬರಿಗೊಂಡ ಕುಟುಂಬಸ್ಥರು, ತಕ್ಷಣವೇ ಪ್ರಸಿದ್ಧ ಉರಗ ರಕ್ಷಕ ನಾಗೇಂದ್ರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ನಾಗೇಂದ್ರ ಅವರು, ಯಾವುದೇ ಅಪಾಯವಾಗದಂತೆ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ರಕ್ಷಿಸಿ ಹೆಸರಘಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಇದರಿಂದಾಗಿ ದೊಡ್ಡದೊಂದು ಅನಾಹುತ ತಪ್ಪಿದಂತಾಗಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ರಾತ್ರಿ ವೇಳೆ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿಡುವುದು ಸೂಕ್ತ. ಈ ಬಾರಿ ಸೆಕೆ ಎಂದು ಕಿಟಕಿ ಬಾಗಿಲುಗಳನ್ನು ತೆರೆದಿಟ್ಟರೆ ಇಂತಹ ಸನ್ನಿವೇಶಗಳು ನಡೆಯುವುದರಲ್ಲಿ ಸಂಶಯವಿಲ್ಲ ಮನೆಗೆ ಹಾವು ಬಂದರೆ ಗಾಬರಿಯಾಗದೆ, ತಕ್ಷಣವೇ ಅನುಭವಿ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ನಾಗೇಂದ್ರ ತಿಳಿಸಿದ್ದಾರೆ
