ಮೈಸೂರು: ಆನೆ ದಂತ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ-WebnewsKannada

ಮೈಸೂರು: ಆನೆ ದಂತ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಬಂಧಿಸಿ, ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹುಣಸೂರು ತಾಲೂಕಿನ ಬಲ್ಲೇನಹಳ್ಳಿಯ ಜೆ.ರವಿಚಂದ್ರ (35) ಹಾಗೂ ಕ್ಯಾತನಮಾರನಹಳ್ಳಿಯ ರಾಜೇಶ್ (33) ಬಂಧಿತ ಆರೋಪಿಗಳು.

ರಾಜೇಶ್ ತನ್ನ ಬ್ಯಾಗ್‌ನಲ್ಲಿ ಆನೆ ದಂತ ಇಟ್ಟುಕೊಂಡು ಬಜಾಜ್ ಪಲ್ಸರ್ ಬೈಕ್‌ನಲ್ಲಿ ಮೈಸೂರು ತಾಲೂಕಿನ ಚಿಕ್ಕಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀರಾಮ ಬಡಾವಣೆಯ ಮೊಸಂಬಾಯನಹಳ್ಳಿ ರಸ್ತೆಯಲ್ಲಿ ಶುಕ್ರವಾರ ಹೋಗುತ್ತಿದ್ದಾಗ, ಅರಣ್ಯ ಸಂಚಾರಿ ದಳಕ್ಕೆ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದಾರೆ. ಕೂಡಲೇ ಅಲರ್ಟ್ ಆದ ಅರಣ್ಯ ಸಂಚಾರಿ ದಳ ಸಿಬ್ಬಂದಿಯು, ರಾಜೇಶ್ನನ್ನು ಸಂಜೆ 6 ಗಂಟೆಯ ವೇಳೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಆಗ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಹೋಗುತಿದ್ದು, ಇದನ್ನು ಮಾರಾಟ ಮಾಡಲು ಇಬ್ಬರು ಸಹಕಾರ ನೀಡಿದ್ದಾರೆ ಎಂದು ರಾಜೇಶ್ ಹೇಳಿದ್ದಾನೆ.

ಈತನ ಹೇಳಿಕೆ ಆಧಾರದ ಮೇಲೆ ಶುಕ್ರವಾರ ರಾತ್ರಿ 10 ಗಂಟೆಯಲ್ಲಿ ಹುಣಸೂರು ಪಟ್ಟಣದಲ್ಲಿ ರವಿಚಂದ್ರನನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆದಿದೆ. ಹೆಚ್.ಡಿ.ಕೋಟೆ ಮೂಲದ ಮತ್ತೊಬ್ಬ ಆರೋಪಿಯು ನಾಪತ್ತೆಯಾಗಿದ್ದು, ಈತನ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಆನೆಯ ದಂತ ಸಿಕ್ಕಿದೆ ಎಂದು ಆರೋಪಿಗಳು ಹೇಳಿದ್ದಾರೆ. ರವಿಚಂದ್ರ ಹಾಗೂ ರಾಜೇಶ್ ನನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಾಮರಾಜನಗರ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿಪ್ರಿಯ ಹಾಗೂ ಮೈಸೂರು ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೈ.ರಾಜು ಅವರ ಮಾರ್ಗದರ್ಶನದಲ್ಲಿ ಆನೆ ಕಾರ್ಯಪಡೆಯ ಎಸಿಎಫ್ ಜಿ.ರುದ್ರೇಶ್, ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ, ಉಪ ವಲಯ ಅರಣ್ಯಾಧಿಕಾರಿ ಟಿ.ಸಿ.ಕನ್ನಿಕಾ, ಗಸ್ತು ಅರಣ್ಯ ಪಾಲಕರಾದ ತಿರುಪತಿ ಪೂಜಾರ, ಆರ್.ಸಿದ್ದರಾಜಶೆಟ್ಟಿ, ಇಮಾಮ ಸಾಬ ಸಗರಿ ಕಾರ್ಯಾಚರನೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *