
ಮಂಗಳೂರು: ಸೈಬರ್ ಖದೀಮರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರಿಗೆ ವಿವಿಧ ರೀತಿಯಲ್ಲಿ ಖದೀಮರು ವಂಚಿಸಿ, ಲಕ್ಷ ಲಕ್ಷ ರೂಪಾಯಿ ದೋಚುತ್ತಿರುವ ಪ್ರಕರಣಗಳು ನಿತ್ಯ ಸಾಮಾನ್ಯವಾಗಿವೆ. ಈ ಕುರಿತು ಮಂಗಳೂರು ಸೈಬರ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಕ್ರೆಡಿಟ್ ಕಾರ್ಡ್ನಿಂದ ಹಣ ಎಗರಿಸಿದ ಕಳ್ಳರು: ಕ್ರೆಡಿಟ್ ಕಾರ್ಡ್ ವಿವರಗಳನ್ನು ಅಕ್ರಮವಾಗಿ ಬಳಸಿ, ಕಾರ್ಡುದಾರರ ಗಮನಕ್ಕೆ ಬಾರದಂತೆ ಅಮೆಜಾನ್ ಪೇ ಹಾಗೂ ಫೇಸ್ಬುಕ್ ಜಾಹೀರಾತು ಪಾವತಿ ಹೆಸರಿನಲ್ಲಿ ಸುಮಾರು 1.98 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ನಗರದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.
ಮೊಬೈಲ್ಗೆ ಬಂದಿತ್ತು ಹಣ ಕಡಿತದ ಸರಣಿ ಸಂದೇಶಗಳು: ದಿನಾಂಕ 19-09-2026 ರಂದು 45 ವರ್ಷದ ದೂರುದಾರರ ಮೊಬೈಲ್ ಸಂಖ್ಯೆಗೆ ಬ್ಯಾಂಕ್ನಿಂದ ಹಣ ಕಡಿತಗೊಂಡ ಸಂದೇಶಗಳು ಸರಣಿಯಾಗಿ ಬಂದಿವೆ.
ದೂರುದಾರರ ಬ್ಯಾಂಕ್ ಆಫ್ ಬರೋಡಾ (Bank of Baroda) ಕ್ರೆಡಿಟ್ ಕಾರ್ಡ್ ಮೂಲಕ ‘ಅಮೆಜಾನ್ ಪೇ ಪ್ರೈವೇಟ್ ಲಿಮಿಟೆಡ್’ ಹಾಗೂ ‘ಫೇಸ್ಬುಕ್ ಜಾಹೀರಾತು’ ಮೂಲಕ ಹಂತ-ಹಂತವಾಗಿ ಒಟ್ಟು 1,98,500 ರೂಪಾಯಿ ಹಣ ವರ್ಗಾವಣೆಯಾಗಿರುವ ಬಗ್ಗೆ ಸಂದೇಶಗಳಲ್ಲಿ ತಿಳಿಸಲಾಗಿತ್ತು. ತಾವು ಯಾವುದೇ ವಹಿವಾಟು ನಡೆಸದಿದ್ದರೂ ಹಾಗೂ ಒಟಿಪಿ ಹಂಚಿಕೊಳ್ಳದಿದ್ದರೂ ಇಷ್ಟೊಂದು ದೊಡ್ಡ ಮೊತ್ತ ಕಡಿತಗೊಂಡಿರುವುದನ್ನು ಕಂಡು ದೂರುದಾರರು ದಂಗಾಗಿದ್ದಾರೆ.
ಸಿಇಎನ್ ಠಾಣೆಗೆ ದೂರು: ಸೈಬರ್ ವಂಚಕರು ಆನ್ಲೈನ್ ಮೂಲಕ ತಮ್ಮ ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ಅನ್ನು ಅನಧಿಕೃತವಾಗಿ ದುರುಪಯೋಗಪಡಿಸಿಕೊಂಡು, ತಮಗೆ ಕಿಂಚಿತ್ತೂ ತಿಳಿಯದಂತೆ ವಂಚನೆಯಿಂದ ಒಟ್ಟು 1,98,500 ರೂಪಾಯಿ ಲಪಟಾಯಿಸಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.
ಮೋಸದಿಂದ ಹಣ ವರ್ಗಾಯಿಸಿಕೊಂಡಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಕೋರಿ ಅವರು ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮನೆಯಲ್ಲಿದ್ದಾಗ ಬಂದಿತ್ತು ಹಣ ಕಡಿತದ ಮೆಸೇಜ್: ಇನ್ನೊಂದು ಪ್ರಕರಣದಲ್ಲಿ ಡೆಬಿಟ್ ಕಾರ್ಡ್ನಿಂದ 2.44 ಲಕ್ಷ ಎಗರಿಸಿದ ಕುರಿತು ದೂರು ದಾಖಲಾಗಿದೆ. ಖಾತೆಯಲ್ಲಿದ್ದ ಡೆಬಿಟ್ ಕಾರ್ಡ್ ವಿವರಗಳನ್ನು ಅಕ್ರಮವಾಗಿ ಬಳಸಿ, ವ್ಯಕ್ತಿಯೊಬ್ಬರ ಗಮನಕ್ಕೆ ಬಾರದಂತೆ 2.44 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ನಗರದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.
ಮನೆಯಲ್ಲಿದ್ದಾಗ ಬಂದಿತ್ತು ಹಣ ಕಡಿತದ ಮೆಸೇಜ್: ದಿನಾಂಕ 19-09-2026 ರಂದು 47 ವರ್ಷದ ದೂರುದಾರರು ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ, ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್ನಿಂದ ಹಣ ಕಡಿತಗೊಂಡ ಸಂದೇಶಗಳು ಬಂದಿವೆ.
ದೂರುದಾರರ ಐಸಿಐಸಿಐ (ICICI) ಬ್ಯಾಂಕ್ ಖಾತೆಗೆ ಸಂಬಂಧಿಸಿದ ಡೆಬಿಟ್ ಕಾರ್ಡ್ ಮೂಲಕ ಒಟ್ಟು 2,44,691.49 ರೂಪಾಯಿ ಮೊತ್ತವು ಅಪರಿಚಿತ ಖಾತೆಗೆ ವರ್ಗಾವಣೆಯಾಗಿರುವ ಬಗ್ಗೆ ಸಂದೇಶದಲ್ಲಿ ತಿಳಿಸಲಾಗಿತ್ತು. ಯಾವುದೇ ಒಟಿಪಿ ಹಂಚಿಕೊಳ್ಳದಿದ್ದರೂ ಹಾಗೂ ಯಾವುದೇ ವಹಿವಾಟು ನಡೆಸದಿದ್ದರೂ ಏಕಾಏಕಿ ಇಷ್ಟೊಂದು ದೊಡ್ಡ ಮೊತ್ತ ಕಡಿತಗೊಂಡಿರುವುದನ್ನು ಕಂಡು ದೂರುದಾರರು ಕಂಗಾಲಾಗಿದ್ದಾರೆ.
ಸಿಇಎನ್ ಠಾಣೆಗೆ ದೂರು: ಯಾರೋ ಅಪರಿಚಿತ ಸೈಬರ್ ವಂಚಕರು ಆನ್ಲೈನ್ ಮೂಲಕ ತಮ್ಮ ಐಸಿಐಸಿಐ ಬ್ಯಾಂಕ್ನ ಡೆಬಿಟ್ ಕಾರ್ಡ್ ವಿವರಗಳನ್ನು ದುರುಪಯೋಗಪಡಿಸಿಕೊಂಡು, ತಮಗೆ ಕಿಂಚಿತ್ತೂ ತಿಳಿಯದಂತೆ ಒಟ್ಟು ರೂ. 2,44,691.49 ಹಣವನ್ನು ಲಪಟಾಯಿಸಿದ್ದಾರೆ ಎಂದು ನೊಂದ ವ್ಯಕ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಂಚಕರ ಬ್ಯಾಂಕ್ ಖಾತೆ ಹಾಗೂ ಹಣ ವರ್ಗಾವಣೆಯ ಹಾದಿಯ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ದೈನಂದಿನ ಆದಾಯದ ಆಮಿಷವೊಡ್ಡಿ ವಂಚನೆ: ಇನ್ನೊಂದು ಪ್ರಕರಣದಲ್ಲಿ ಆನ್ಲೈನ್ ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿದಿನವೂ ಕೈತುಂಬಾ ಲಾಭ ಗಳಿಸಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ-ಹಂತವಾಗಿ ಬರೋಬ್ಬರಿ 2.03 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಂಗಳೂರು ನಗರದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.
