ಮಂಗಳೂರು MRPL ಸ್ಫೋಟಕ್ಕೆ ಕಾರಣವಾಯ್ತಾ ದೈವಾಕ್ರೋಶ? ನೆಲ್ಲಿದಡಿ ಗುತ್ತು ಜುಮಾದಿ ದೈವದ ಕಾರ್ಣಿಕದ ಚರ್ಚೆ!-WebnewsKannada



ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಸ್ಫೋಟ ಹಾಗೂ ಅಗ್ನಿ ಅವಘಡದ ಬೆನ್ನಲ್ಲೇ ತುಳುನಾಡಿನಲ್ಲಿ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದ (MSEZ) ವ್ಯಾಪ್ತಿಯಲ್ಲಿರುವ 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ಆಕ್ರೋಶವೇ ಈ ಅಗ್ನಿ ಅವಘಡಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಮತ್ತು ಸಂಶಯಗಳು ಕರಾವಳಿ ಭಾಗದಲ್ಲಿ ಈಗ ವ್ಯಾಪಕವಾಗಿ ಕೇಳಿಬರುತ್ತಿವೆ.
ದೈವಾರಾಧನೆಗೆ ಕಂಪನಿಯ ಅಧಿಕಾರಿಗಳು ತಡೆ ಒಡ್ಡಿದ ಸಂದರ್ಭದಲ್ಲಿ, “ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ, ನನ್ನ ಮಣ್ಣು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ” ಎಂದು ದೈವ ನುಡಿದಿತ್ತು. ಈ ನುಡಿಗೂ ಹಾಗೂ ಪ್ರಸ್ತುತ ನಡೆದ ಅಗ್ನಿ ಅವಘಡಕ್ಕೂ ನಿಕಟ ಸಂಬಂಧವಿದೆ ಎಂದು ಸ್ಥಳೀಯರು ಹಾಗೂ ದೈವಾರಾಧಕರು ಬಲವಾಗಿ ನಂಬುತ್ತಿದ್ದಾರೆ.
800 ವರ್ಷಗಳ ಇತಿಹಾಸ ಮತ್ತು ಭೂಸ್ವಾಧೀನದ ಹಿನ್ನೆಲೆ:
2006ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರವು ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಹಾಗೂ ಕಳವಾರು ಗ್ರಾಮಗಳ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಈ ಬೃಹತ್ ಯೋಜನೆಗಾಗಿ ಪ್ರದೇಶದ ಸಮೃದ್ಧ ಗದ್ದೆಗಳು, ಶಾಲೆಗಳು, ಚರ್ಚ್, ಮಸೀದಿಗಳು, ಸಾವಿರಾರು ಮನೆಗಳು, ನಾಗಬನ ಹಾಗೂ ಹಲವಾರು ದೈವಸ್ಥಾನಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದವು.
ಆದರೆ 800 ವರ್ಷಗಳ ಸುದೀರ್ಘ ಇತಿಹಾಸವಿದ್ದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನವನ್ನು ಮುಟ್ಟಲು ಕಂಪನಿಗೆ ಸಾಧ್ಯವಾಗಲಿಲ್ಲ. ಜಾಗವನ್ನು ಬಲಾತ್ಕಾರವಾಗಿ ಕಂಪನಿ ತನ್ನ ಹೆಸರಿಗೆ ಬರೆಸಿಕೊಂಡಿದ್ದರೂ ಸಹ, “ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಟ್ಟು ಕದಲುವುದಿಲ್ಲ” ಎಂದು ದೈವ ನುಡಿದಿತ್ತು. ತದನಂತರ 2016ರಲ್ಲಿ ಈ ಜಾಗವನ್ನು ನೆಲಸಮ ಮಾಡಲು ಮತ್ತೊಮ್ಮೆ ಯತ್ನಿಸಿದಾಗಲೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಪರಿಸ್ಥಿತಿ ಗಂಭೀರವಾಗಿದ್ದನ್ನು ಅರಿತ ಅಂದಿನ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, ದೈವಸ್ಥಾನವನ್ನು ಒಂದು ಸ್ಮಾರಕದಂತೆ ಉಳಿಸಿಕೊಂಡು, ನಿತ್ಯ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದರು.
ಪೂಜೆಗೆ ತಡೆ ಮತ್ತು ದೈವದ ಕಠಿಣ ಎಚ್ಚರಿಕೆ:
ಕಳೆದ 2025ರಲ್ಲಿ MSEZ ಹಾಗೂ MRPL ವ್ಯಾಪ್ತಿಯ ಅಧಿಕಾರಿಗಳು ಮತ್ತೆ ತಗಾದೆ ತೆಗೆದು, ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು-ನೀರು ಇಡಲು ಹಾಗೂ ಸಂಕ್ರಮಣದ ನಿತ್ಯ ಪೂಜೆಗೆ ಗೇಟ್‌ ಬಳಿಯಲ್ಲೇ ತಡೆ ಒಡ್ಡಿದ್ದರು. ತುಳುನಾಡಿನ ಅತ್ಯಂತ ಪ್ರಸಿದ್ಧ ಹಾಗೂ ನಂಬಿಕೆಯ ದೈವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಿದ್ದು ಸಾರ್ವಜನಿಕವಾಗಿ ಮತ್ತು ದೈವಾರಾಧಕರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ತದನಂತರ ‘ನೆಲ್ಲಿದಡಿ ಗುತ್ತು ಉಳಿಸಿ’ ಬೃಹತ್ ಅಭಿಯಾನದ ಬಳಿಕ ಅಧಿಕಾರಿಗಳು ಪಾಸ್ ನೀಡಿ ದೈವಾರಾಧನೆಗೆ ಸೀಮಿತ ಅವಕಾಶ ನೀಡಿದ್ದರು. ಆ ಸಂದರ್ಭದಲ್ಲಿ ನಡೆದ ದರ್ಶನ ಸೇವೆಯ ವೇಳೆ ಕಾಂತೇರಿ ಜುಮಾದಿ ದೈವವು ನೆಲ್ಲಿದಡಿ ಗುತ್ತುವಿನ ಮುಖ್ಯಸ್ಥ ಚೌಟರಿಗೆ ಅಭಯ ನೀಡುತ್ತಾ, ಕಂಪನಿ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
“ನನ್ನ ಸ್ಥಾನ ಕೆಡವಲು ಬಂದವರಿಗೆ ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ. ಜಾಗವನ್ನು ದೈವಸ್ಥಾನದ ಹೆಸರಿಗೆ ಬರೆದುಕೊಡದಿದ್ದರೆ ಬೆಂಕಿ ಸುರಿಸುತ್ತೇನೆ!” ಎಂದು ನಾಲ್ಕು ತಿಂಗಳ ಹಿಂದೆಯಷ್ಟೇ ದೈವವು ಕಠಿಣ ಎಚ್ಚರಿಕೆ ನೀಡಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಿದ್ದಾರೆ.
ಕರಾವಳಿಯಲ್ಲಿ ಮುನ್ನೆಲೆಗೆ ಬಂದ ಕಾರ್ಣಿಕದ ಚರ್ಚೆ:
ದೈವವು “ಬೆಂಕಿ ಸುರಿಸುತ್ತೇನೆ” ಎಂದು ನುಡಿದು ಕೆಲವೇ ತಿಂಗಳುಗಳಲ್ಲಿ MRPL ಆವರಣದಲ್ಲಿ ಇಂತಹ ಭಾರಿ ಸ್ಫೋಟ ಹಾಗೂ ಬೆಂಕಿ ಅವಘಡ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ನೀಡಿದ ನುಡಿಯಂತೆ ನಡೆದುಕೊಳ್ಳುವುದು ಈ ಕ್ಷೇತ್ರದ ದೈವಗಳ ವೈಶಿಷ್ಟ್ಯ ಎಂದು ನಂಬಿರುವ ಸ್ಥಳೀಯರು, ಇದು ದೈವ ನೀಡಿದ ಎಚ್ಚರಿಕೆಯ ಸಂಕೇತವೇ ಎಂದು ಚರ್ಚಿಸುತ್ತಿದ್ದಾರೆ. ಕಂಪನಿ ಹಾಗೂ ಆಡಳಿತ ಮಂಡಳಿಯು ದೈವದ ಸ್ಥಾನಕ್ಕೆ ಗೌರವ ನೀಡಿ, ಪೂಜಾ ಕೈಂಕರ್ಯಗಳಿಗೆ ಸಂಪೂರ್ಣ ಮುಕ್ತ ಅವಕಾಶ ನೀಡಬೇಕು ಎಂಬ ಆಗ್ರಹ ಕರಾವಳಿ ಭಾಗದಲ್ಲಿ ಮತ್ತೊಮ್ಮೆ ಜೋರಾಗಿದೆ.

Leave a Reply

Your email address will not be published. Required fields are marked *