
ಹೈದರಾಬಾದ್, ಜುಲೈ 19: ಆಕೆಯ ಹೆಸರು ತೇಜಸ್ವಿನಿ. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಮೂಲದ ವಕ್ಕುಲಗಡ್ಡಿ ಈಶ್ವರ್ ರಾವ್ ಮತ್ತು ಅರುಣಾ ದಂಪತಿಯ ಪುತ್ರಿಯಾದ 25 ವರ್ಷದ ತೇಜಸ್ವಿನಿ ಬೆಂಗಳೂರಿನಲ್ಲಿ (Bengaluru) ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ತೀವ್ರ ಒತ್ತಡವನ್ನು ಎದುರಿಸಿದ ಅವರು 6 ತಿಂಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ವಿಶಾಖಪಟ್ಟಣಕ್ಕೆ ತೆರಳಿದ್ದರು. ಇದಾದ ನಂತರ, 2 ತಿಂಗಳ ಹಿಂದೆ ಅವರು ತಮ್ಮ ತಾಯಿ ಅರುಣಾ ಅವರೊಂದಿಗೆ ಹೈದರಾಬಾದ್ಗೆ ಬಂದು ಪೀರ್ಜಾದಿಗುಡದ ಶಂಕರ್ನಗರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಶುಕ್ರವಾರ ಮಧ್ಯರಾತ್ರಿ 2.30ರ ಸುಮಾರಿಗೆ ತೇಜಸ್ವಿನಿ ಎಚ್ಚರಗೊಂಡು ತನ್ನ ತಾಯಿಯ ರೂಮನ್ನು ಹೊರಗಿನಿಂದ ಲಾಕ್ ಮಾಡಿ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಿಂದ ಹೊರಟ ಆಕೆ ಬೆತ್ತಲೆಯಾಗಿ ನಡೆದುಕೊಂಡು ಹೋಗಿ ದೇವಸ್ಥಾನದೊಳಗೆ ಹೊಕ್ಕು, ಅಲ್ಲಿದ್ದ ದೇವರ ವಿಗ್ರಹವನ್ನು ಹಿಡಿದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!.

ಹೈದರಾಬಾದ್ನ ಈ ಯುವತಿಯ ನಿಗೂಢ ಸಾವು ಭಾರಿ ತಲ್ಲಣ ಸೃಷ್ಟಿಸಿದೆ. ಮೃತ ಯುವತಿ ಕೆರೆಗೆ ಜಿಗಿಯುವ ಮುನ್ನ ನಗ್ನ ಸ್ಥಿತಿಯಲ್ಲಿ ದೇವಸ್ಥಾನ ಪ್ರವೇಶಿಸಿ, ದೇವಿಯ ವಿಗ್ರಹವನ್ನು ಹೊತ್ತೊಯ್ದು ಕೆರೆಗೆ ಜಿಗಿದಿದ್ದಾರೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಪೊಲೀಸರು ಕೆರೆಯಲ್ಲಿ ನಾಪತ್ತೆಯಾಗಿರುವ ದೇವಿಯ ವಿಗ್ರಹಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದಕ್ಕಾಗಿ ಆಕೆ ಆಯ್ದುಕೊಂಡ ಮಾರ್ಗದ ಬಗ್ಗೆ ತೀವ್ರ ಅನುಮಾನ, ನಿಗೂಢ ಪ್ರಶ್ನೆಗಳು ಎದ್ದಿರುವುದರಿಂದ ಪೊಲೀಸರು ಆಕೆಯ ಮಾನಸಿಕ ಸ್ಥಿತಿ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ.



