
ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ಕೋಳಿಗಳು (Broiler chickens) ಅಪಘಾತದಲ್ಲಿ ಸಾವಿಗೀಡಾದರೆ, ಅವುಗಳನ್ನು ‘ಜೀವಸಂಪತ್ತು’ ಹಾಗೂ ‘ಸರಕು’ ಎಂದು ಪರಿಗಣಿಸಬೇಕು ಎಂದು ಧಾರವಾಡ ಹೈಕೋರ್ಟ್ ಪೀಠ (Dharwad High Court) ಅಭಿಪ್ರಾಯಪಟ್ಟಿದೆ. ಅಲ್ಲದೇ ಮೋಟಾರು ವಾಹನ ಕಾಯ್ದೆ ಅಡಿ ಕೋಳಿಗಳು ಸಹ ಸಾಕುಪ್ರಾಣಿಗಳ ವ್ಯಾಪ್ತಿಗೆ ಬರಲಿದ್ದು, ಅವುಗಳನ್ನು ಸರಕು ಎಂದು ಪರಿಗಣಿಸಿ ಮಾಲೀಕರಿಗೆ ಅಪಘಾತ ಪರಿಹಾರ ವಿಧಿಸಬೇಕು ಎಂದು ಹೈಕೋರ್ಟ್ ಹೇಳಿದೆ
ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯನ್ನು ಉಲ್ಲೇಖಿಸಿಲ್ಲ. ಆದರೆ, ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 2(13) ರ ಪ್ರಕಾರ ‘ಸರಕು’ ಎಂಬ ಪದವು ಜೀವಸಂಪತ್ತನ್ನು ಒಳಗೊಂಡಿರುತ್ತದೆ. ಕೋಳಿಗಳೂ ಸಹ ಜೀವವಿರುವ ಪ್ರಾಣಿ/ಪಕ್ಷಿಗಳಾಗಿರುವುದರಿಂದ ಅವುಗಳನ್ನು ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸಬೇಕು ಎಂದು ಪೀಠ ತಿಳಿಸಿದೆ.ಅಲ್ಲದೆ, ಬಳ್ಳಾರಿಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ 4,51,000 ರೂಪಾಯಿಗಳ ಪರಿಹಾರ ಮೊತ್ತವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ನ್ಯಾಯಾಧಿಕರಣ ವಿಧಿಸಿದ್ದ ಶೇ.7ರಷ್ಟು ಬಡ್ಡಿದರವನ್ನು ಶೇ.6ಕ್ಕೆ ಇಳಿಸಿ ಆದೇಶಿಸಿದೆ
ಅಪಘಾತದ ವೇಳೆ ವಾಹನದಲ್ಲಿದ್ದ ಕೋಳಿಗಳಿಗೆ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು ಎಂದು ಮಾಲೀಕ ಕೆ.ವೀರನಾರಾಯಣ ಸ್ವಾಮಿ ಮತ್ತು ಕೋಳಿಗಳಿಗೆ ಪರಿಹಾರ ನೀಡಲು ಸೂಚನೆ ನೀಡಿದ್ದ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಸಲ್ಲಿಸಿದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ.ಗೀತಾ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಮೃತ ಕೋಳಿಗಳಿಗೂ ವಿಮಾ ಕಂಪನಿಯು ಪರಿಹಾರ ನೀಡುವ ಬಾಧ್ಯಸ್ಥನಾಗಿರಲಿದೆ ಎಂದು ಪೀಠ ಹೇಳಿದೆ.


