ರಾಜ್ಯ

ಚಿಕನ್ ಫೆರಿ ಫೆರಿಯಲ್ಲಿ ಕೆಟ್ಟ ವಾಸನೆ: ದಾಳಿ ವೇಳೆ ಮಂಗಳೂರಿನ KFCಯಲ್ಲಿ ಹಳೇ ಮಾಂಸ ಪತ್ತೆ!

ಮಂಗಳೂರು, ಆಗಸ್ಟ್ 16: ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್ಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುತ್ತಿರುವ ನಡುವೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ತವರು ಜಿಲ್ಲೆ ಮಂಗಳೂರಲ್ಲಿಯೂ (Mangaluru) ಇದೇ ಮಾದರಿಯ ತಪಾಸಣೆ ನಡೆದಿದೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿರುವ ಕೆಎಫ್ಸಿ ಔಟ್ಲೆಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸ್ಟೋರೇಜ್ನಲ್ಲಿ ಹಳೇ ಮಾಂಸ, ಅವಧಿ ಮೀರಿದ ಎಣ್ಣೆ ಪತ್ತೆಯಾಗಿದೆ. ಗ್ರಾಹಕರೊಬ್ಬರು ಇಲ್ಲಿಂದ ಚಿಕನ್ ಫೆರಿ ಫೆರಿ ತರಿಸಿದ್ದರು. ಬಂದ ಫುಡ್ನಿಂದ ವಿಪರೀತ ದುರ್ವಾಸನೆ ಬರುತ್ತಿದ್ದ ಕಾರಣ ಅವರು ಆರೋಗ್ಯ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ

ಕೆಎಫ್ಸಿ ಔಟ್ಲೆಟ್ನಲ್ಲಿ ಪರಿಶೀಲನೆ ವೇಳೆ ಸುಮಾರು 4-8 ತಿಂಗಳ ಮಾಂಸವನ್ನು ದಾಸ್ತಾನಿಟ್ಟಿರೋದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಸ್ಟೋರೆಜ್ ರೂಂ ಪ್ರವೇಶಿಸುತ್ತಿದ್ದಾಗಲೇ ಗಬ್ಬು ವಾಸನೆ ಬಂದಿದ್ದು, ಔಟ್‌ಲೆಟ್‌ಗೆ ಬೆಂಗಳೂರಿನಿಂದ ಕೋಳಿ ಮಾಂಸ ರವಾನೆಯಾಗುತ್ತಿದೆ ಎಂಬುದು ಗೊತ್ತಾಗಿದೆ. ಸ್ಟೊರೇಜ್‌ನಲ್ಲಿ ಚಿಲ್ಲ್ ಚಿಕನ್, ಪ್ರೊಝನ್ ಚಿಕನ್ ಸೇರಿದಂತೆ 3 ಮಾದರಿಯ ಚಿಕನ್‌ಗಳನ್ನು ದಾಸ್ತಾನು ಮಾಡಲಾಗಿದ್ದು, 3 ದಿನಗಳಿಂದ ಒಂದೇ ಎಣ್ಣೆಯನ್ನು ಬಳಕೆ ಮಾಡುತ್ತಿರುವ ಮಾಹಿತಿ ಸಿಕ್ಕಿದೆ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದ್ದ ಕಾರಣ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ಪಡೆದಿದ್ದಾರೆ.

ತಪಾಸಣೆ ವೇಳೆ ಕಳಪೆ ಗುಣಮಟ್ಟದ ಆಹಾರಗಳು ಪತ್ತೆಯಾಗಿರುವ ಹಿನ್ನೆಲ ಸದ್ಯ ಮಳಿಗೆಯನ್ನು ಅಧಿಕಾರಿಗಳು ಬಂದ್​​ ಮಾಡಿಸಿದ್ದಾರೆ. ಕೋಳಿ ಮಾಂಸ ಮತ್ತು ಎಣ್ಣೆಯ ಮಾದರಿಯನ್ನು ಔಟ್​​ಲೆಟ್​​ನಿಂದ ಸಂಗ್ರಹಿಸಲಾಗಿದ್ದು, ಈ ಸ್ಯಾಂಪಲ್​​ಗಳನ್ನು ಮೈಸೂರಿನ ಲ್ಯಾಬ್​​ಗೆ ರವಾನಿಸಲಾಗಿದೆ. ಅಲ್ಲಿಂದ ಅಂತಿಮ ವರದಿ ಬಂದ ಬಳಿಕ ಇನ್ನಷ್ಟು ಅಸಲಿಯತ್ತು ಬಯಲಾಗಬೇಕಿದೆ

Leave a Reply

Your email address will not be published. Required fields are marked *