webnews kannada

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ

ಬಿಡದಿ ವ್ಯಾಪ್ತಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಶನಿವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಇಂದು ಮುಂಜಾನೆ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇನಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಬಸ್ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಶೈನಿಂಗ್ (ಸೈನ್) ಬೋರ್ಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಬಸ್‌ನ ಚಾಲಕ ಮತ್ತು ಕಂಡಕ್ಟರ್ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ 14 ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ರಾಮನಗರ ತಾಲೂಕಿನ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ಅವರಗೆರೆ ಗೇಟ್ (ಬ್ರಿಡ್ಜ್) ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತಗೊಂಡ ಬಸ್ ಕೇರಳದ ಕೋಝಿಕ್ಕೋಡ್‌ನಿಂದ ಬೆಂಗಳೂರಿನ ಕಡೆಗೆ ಬರುತ್ತಿತ್ತು. ಇನ್ನು, ಮೃತರನ್ನು ಚಾಲಕ ಮಿಥಿಲೇಶ್ ಮತ್ತು ಕಂಡಕ್ಟರ್ ಅರುಣ್ ಎಂದು ಗುರುತಿಸಲಾಗಿದೆ

ಮುಂಜಾನೆ ಚಾಲನೆ ಮಾಡುವಾಗ ಚಾಲಕನಿಗೆ ನಿದ್ದೆಯ ಮಂಪು ಆವರಿಸಿದ್ದೇ ಈ ದುರಂತಕ್ಕೆ ಪ್ರಾಥಮಿಕ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅದರಂತೆ, ನಿದ್ದೆಯ ಮಂಪರಿನಲ್ಲಿ ಬಸ್ ರಸ್ತೆಯ ಎಡಭಾಗಕ್ಕೆ ಚಲಿಸಿ, ಅಲ್ಲಿ ಅಳವಡಿಸಲಾಗಿದ್ದ ಬೃಹತ್ ಕಬ್ಬಿಣದ ಸೈನ್ ಬೋರ್ಡ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಆ ದೊಡ್ಡ ಸೈನ್ ಬೋರ್ಡ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಬಸ್ ಹೆದ್ದಾರಿಯಲ್ಲೇ ಒಂದು ಸೈಡ್ ಗೆ ಪಲ್ಟಿಯಾಗಿದೆ.

Leave a Reply

Your email address will not be published. Required fields are marked *