
ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಇಂದು ಗೌರಿಬಿದನೂರು ತಾಲೂಕಿನ ಅಲ್ಲಿಪುರ ಬಳಿಯ ವೀರಮ್ಮನಹಳ್ಳಿ ನಡುವಿನ ಪ್ರದೇಶದಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆಯ ಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS)V ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ಅಕ್ಟೋಬರ್ 24ರಂದು ನಸುಕಿನ ಜಾವ 3 ಗಂಟೆ 29 ನಿಮಿಷ 42 ಸೆಕೆಂಡ್ಗೆ ಭೂಕಂಪ ಸಂಭವಿಸಿದೆ ಎಂದು ಭೂಕಂಪನದ ದತ್ತಾಂಶ ತಿಳಿಸಿದೆ. ಭೂಕಂಪದ ಕೇಂದ್ರಬಿಂದು 13.497 ಅಕ್ಷಾಂಶ ಹಾಗೂ 77.420 ರೇಖಾಂಶದಲ್ಲಿದ್ದು, ಭೂಮಿಯ ಮೇಲ್ಮೈಯಿಂದ 5 ಕಿಲೋಮೀಟರ್ ಆಳದಲ್ಲಿ ಕಂಪನ ದಾಖಲಾಗಿದೆಭೂಕಂಪನದ ತೀವ್ರತೆ ಕಡಿಮೆ ಮಟ್ಟದಲ್ಲಿದ್ದು, ಘಟನೆಯನ್ನು ಪರಿಶೀಲಿಸಲಾಗಿದೆ (Reviewed) ಎಂದು ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದ ಯಾವುದೇ ಹಾನಿ ಅಥವಾ ಜನರಿಗೆ ಕಂಪನದ ಅನುಭವವಾಗಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
