ಕ್ರೈಂ,

ವಿಚಾರಣಾಧೀನ ಕೈದಿಗೆ ಆಸ್ಪತ್ರೆಯಲ್ಲಿ ರಾಜ್ಯಾತಿಥ್ಯ ಪ್ರಕರಣ; ಪೊಲೀಸ್ ಪೇದೆ ಸಸ್ಪೆಂಡ್

ಮಂಡ್ಯ: ಜೈಲಿನಲ್ಲಿ ಇರಬೇಕಾಗಿದ್ದ ಭೂ ದಾಖಲೆಗಳ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಅನಧಿಕೃತವಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿರುವುದು ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಯಾವುದೇ ಖಾಯಿಲೆ ಇಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ಹಾಗೂ ಆತನೊಂದಿಗೆ ಯುವತಿಯೊಬ್ಬಳು ವಿಶೇಷ ಕೊಠಡಿಯಲ್ಲಿ ಇರುವುದು ಪತ್ತೆಯಾಗಿದೆ.

ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ. ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಲಸುಬ್ರಮಣಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಡಾ. ಮೋಹನ್ ರಾವ್ ನಲ್ವಡೆ, ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಆನಂದ್. ಎಂ ಸೋಮವಾರ ಸಂಜೆ ಮಿಮ್ಸ್ ಆಸ್ಪತ್ರೆಗೆ ಅನಿರೀಕ್ಷಿತವಾಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿ ಮೊಹಮ್ಮದ್​ ಹುಸೇನ್​ಗೆ ಆಗಸ್ಟ್ 21ರಿಂದ ಇಲ್ಲಿಯವರೆಗೂ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಿರುವುದು ಹಾಗೂ ಇದೇ ಕೊಠಡಿಯಲ್ಲಿ ಮಹಿಳೆಯೊಬ್ಬರು ಇರುವುದು ಕಂಡು ಬಂದಿದೆ.

ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿಯಲ್ಲಿ ಎಡಿಎಲ್‌ಆರ್ ಆಗಿ ಕಾರ್ಯನಿರ್ವಹಿಸಿದ್ದ ಮೊಹಮ್ಮದ್ ಹುಸೇನ್ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿಯನ್ನು ಬೇರೆಯವರಿಗೆ ಮಾಡಿಕೊಟ್ಟ ಆರೋಪವಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಜೈಲಿನಲ್ಲಿ ಇರಬೇಕಿದ್ದ ಆತ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಇರುವುದನ್ನು ನ್ಯಾಯಾಧೀಶರ ತಪಾಸಣೆ ವೇಳೆ ಗಮನಿಸಲಾಗಿದೆ. ಈ ವೇಳೆ ಆರೋಪಿಗೆ ಏನಾಗಿದೆ ಎಂದು ವೈದ್ಯಾಧಿಕಾರಿಯನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ಇದಕ್ಕೆ ಆಸ್ಪತ್ರೆಯ ಅಧೀಕ್ಷಕರಾದ ಶಿವಕುಮಾರ್ ಉತ್ತರಿಸಿ, ಮೊಹಮ್ಮದ್ ಹುಸೇನ್ ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಆಗ ನ್ಯಾಯಾಧೀಶರು, ಸ್ಥಳದಲ್ಲೇ ಇದ್ದ ಜೈಲು ಸೂಪರಿಡೆಂಟ್ ಅವರನ್ನು ವಿಚಾರಿಸಿದಾಗ, ಜೈಲಿನ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಆರೋಪಿ ಹುಸೇನ್ ರನ್ನು ಮಿಮ್ಸ್ ಗೆ ದಾಖಲಾಗಿದೆ. ಈ ಬಗ್ಗೆ ಕೋರ್ಟ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ

.ನ್ಯಾಯಾಲಯದ ಅನುಮತಿ ಪಡೆಯದೇ ಅನಧೀಕೃತವಾಗಿ ಆರೋಪಿಯನ್ನು ಆಗಸ್ಟ್ 21 ರಿಂದ ಇಲ್ಲಿಯವರೆಗೂ ದಾಖಲಿಸಿರುವುದು ಸ್ಪಷ್ಟ ಕಾನೂನಿನ ಉಲ್ಲಂಘನೆ ಆಗಿದೆ. ಈ ಬಗ್ಗೆ ಜೈಲು ಸೂಪರಿಟೆಂಡೆಂಟ್ ಹಾಗೂ ಪೊಲೀಸ್ ಅಧಿಕಾರಿ ಹಾಗೂ ಮಿಮ್ಸ್ ಆಸ್ಪತ್ರೆಯ ಅಧೀಕ್ಷಕರವರಿಗೆ ವರದಿ ನೀಡುವಂತೆ ಜಿಲ್ಲಾ ಸತ್ರ ನ್ಯಾಯಾಧೀಶರು ಸೂಚಿಸಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಅಗತ್ಯವಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ

Leave a Reply

Your email address will not be published. Required fields are marked *