
ರಾಜ್ಯದಲ್ಲಿ ಮಳೆಯ ಅಬ್ಬರ ಶುರುವಾಗಿದೆ. ಸೋಮವಾರದಿಂದ ಮೂರು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಭಾರೀ ಮಳೆಯ ಸೂಚನೆ ಹಿನ್ನಲೆಯಲ್ಲಿ ಇಂದು 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow alert) ಘೋಷಿಸಲಾಗಿದೆ.
ಜೂನ್ ತಿಂಗಳ ನಾಲ್ಕನೇ ವಾರಕ್ಕೆ ಪ್ರವೇಶಿಸುತ್ತಿದ್ದರೂ ಈ ಬಾರಿ ಮುಂಗಾರು ಮಳೆ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಬಹುತೇಕ ಕಡಿಮೆಯಾಗಿದೆ. ಕಳೆದ ವರ್ಷದಂತೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಬಿಟ್ಟೂ ಬಿಟ್ಟೂ ಮಳೆ ಬರುತ್ತಿದೆ. ಆದರೆ ಕಳೆದೊಂದು ವಾರದಿಂದ ಮಳೆ ಚುರುಕು ಪಡೆದುಕೊಂಡಿದೆ. ಜೂನ್ 21ರಿಂದ ಮುಂದಿನ ಒಂದು ವಾರ ಕಾಲ ಕರ್ನಾಟಕ ನಾನಾ ಭಾಗಗಳಲ್ಲಿ ನೈರುತ್ಯ ಮುಂಗಾರು ಮಳೆ ಚುರುಕುಗೊಳ್ಳಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಕರಾವಳಿ, ಉತ್ತರಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದೇ 24ರಿಂದ ಉತ್ತರ ಕನ್ನಡ ಜಿಲ್ಲೆಗೂ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಯ ಒಂದೆರಡು ಕಡೆ ಸೋಮವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಸಾಧಾರಣ ಮಳೆಯಾಗಲಿದ ಎನ್ನಲಾಗಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಯ ಒಂದು ಅಥವಾ ಎರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.




