ಕರಾವಳಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರುಡ್‌ಸೆಟ್ ತರಬೇತಿದಾರರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಮಾರ್ಗದರ್ಶನ

ಉಜಿರೆ, ಆ.22: ರುಡ್‌ಸೆಟ್ ಸಂಸ್ಥೆ, ಉಜಿರೆಯಲ್ಲಿ ನಡೆಯುತ್ತಿರುವ ಅಸಿಸ್ಟೆಂಟ್ ಬುಕ್‌ಕೀಪರ್ ಹಾಗೂ ವಸ್ತ್ರಚಿತ್ರಕಲಾ–ಲಘು ಉದ್ಯಮಿ ತರಬೇತಿಯ ಶಿಬಿರಾರ್ಥಿಗಳು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.

ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಆಧುನಿಕ ಜಗತ್ತಿನಲ್ಲಿ ನಿರಂತರವಾಗಿ ಬದಲಾವಣೆಗಳು ನಡೆಯುತ್ತಿದ್ದು, ಅದರೊಂದಿಗೆ ನಾವು ಕೂಡ ಬದಲಾಗುತ್ತಾ ಬೆಳೆಯಬೇಕು. ಹೊಸ ತಂತ್ರಜ್ಞಾನ, ಹೊಸ ಆಲೋಚನೆ ಮತ್ತು ಹೊಸತನವನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ವ್ಯವಹಾರವನ್ನು ಪ್ರಾಮಾಣಿಕತೆ ಹಾಗೂ ಗುಣಮಟ್ಟದೊಂದಿಗೆ ನಡೆಸಿದಾಗ ಯಶಸ್ಸು ಸಾಧ್ಯ ಎಂದು ತಿಳಿಸಿದರು.

ರುಡ್‌ಸೆಟ್ ಸಂಸ್ಥೆಯಲ್ಲಿ ಪಡೆಯುತ್ತಿರುವ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಕಲಿತ ಕೌಶಲ್ಯವನ್ನು ಕೇವಲ ಉದ್ಯೋಗಕ್ಕಾಗಿ ಬಳಸದೆ, ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಸುನಿಲ್ ಜಿ. ನಾಯಕ್, ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್, ಅತಿಥಿ ಉಪನ್ಯಾಸಕರಾದ ಶ್ರೀ ಸಚಿನ್ ಹಾಗೂ ಶ್ರೀಮತಿ ರಶ್ಮಿ ರಾಘವೇಂದ್ರ, ಸುರೇಶ ಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *