
ಪಾಕಿಸ್ತಾನ ಸೇನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 11ರಂದು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಶ್ಚಿಮ ಬಂಗಾಳ ಮೂಲದ 25 ವರ್ಷದ ಅಸಾಫುಲ್ ಮಲ್ಲಿಕ್ ಬಿನ್ ಅಬೀದ್ ಮಲ್ಲಿಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಜಿಗಣಿಯಲ್ಲಿ ವಾಸವಾಗಿದ್ದ ಆರೋಪಿಯು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಅಫ್ಘಾನಿಸ್ತಾನದ ಇಮ್ರಾನ್ ಅಹಿಂದರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಈತನ ಮೂಲಕ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಿಕೊಂಡು, ಪಾಕಿಸ್ತಾನ ಸೇನೆ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಫ್ಘಾನಿಸ್ತಾನಕ್ಕೆ ತೆರಳಲು ಆರೋಪಿ ಪಾಸ್‌ಪೋರ್ಟ್ ಮಾಡಿಸಿಕೊಂಡು ವೀಸಾಗೂ ಅರ್ಜಿ ಸಲ್ಲಿಸಿದ್ದ ಆದರೆ ಕಾರಣಾಂತರಗಳಿಂದ ಅಫ್ಘಾನಿಸ್ತಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಪಾಕಿಸ್ತಾನ ಸೇನೆ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶಕ್ಕೆ ಸಂಬಂಧಿಸಿದ ಸಂದೇಶಗಳು ಹಾಗೂ ಆಡಿಯೋ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.
ಡಿಸಿಪಿ ನಾರಾಯಣ್ ಎಂ. ಐಪಿಎಸ್ ಮಾರ್ಗದರ್ಶನದಲ್ಲಿ ಎಸಿಪಿ ಸತೀಶ್ ಕೆ.ಎಂ. ಕೆಎಸ್‌ಪಿಎಸ್ ನೇತೃತ್ವದಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸೋಮಶೇಖರ್ ಜಿ., ಪಿಎಸ್‌ಐ ಶ್ರೀಕಾಂತ್ ನಾಯರ್, ಪಿಎಸ್‌ಐ ಅಯ್ಯಪ್ಪ ಆರ್.ವಿ., ಎಎಸ್‌ಐ ಮಹಾಂತಗೌಡ ಹಾಗೂ ಸಿಬ್ಬಂದಿಗಳಾದ ಮೋಹನ್ ಕೆ.ಕೆ., ವೃಷಭೇಂದ್ರ, ಸಂತೋಷ್, ಪ್ರವೀಣ್, ವೇಣುಗೋಪಾಲ್, ನಾಗೇಶ್, ಅಶೋಕ್ ತಳಗೇರಿ ಮತ್ತು ಆನಂದ್ ಅವರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.


