
ಉಡುಪಿ: ಬ್ರಹ್ಮಾವರದಲ್ಲಿರುವ ಸಿಟಿ ಸೆಂಟರ್ ಹೋಟೆಲ್ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಗುತ್ತಿಗೆದಾರರು ಎದುರಿಸುತ್ತಿರುವ ಬಾಕಿ ಪಾವತಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕ್ಕಾರಿಗಳನ್ನು ನೇಮಿಸಲಾಯಿತು . ಈ ಸಂದರ್ಭದಲ್ಲಿ ಶ್ರೀ ಗೋಕುಲ್ ಶೆಟ್ಟಿ ಅವರನ್ನು ಒಮ್ಮತದಿಂದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರು ಸೇರಿದಂತೆ ಇತರೆ ಪದಾಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡಲಾಗಿದೆ.
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು ₹37,000 ಕೋಟಿಗೂ ಅಧಿಕ ಬಾಕಿ ಬಿಲ್‌ಗಳು ಪಾವತಿಯಾಗದೆ ಉಳಿದಿರುವುದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ, ಕಾರ್ಮಿಕರ ವೇತನ, ಯಂತ್ರೋಪಕರಣಗಳ ನಿರ್ವಹಣೆ ಹಾಗೂ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಗುತ್ತಿಗೆದಾರರ ಮೇಲೆ ಭಾರೀ ಆರ್ಥಿಕ ಒತ್ತಡ ಉಂಟುಮಾಡಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು:
- ಗುತ್ತಿಗೆದಾರರು ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಮುಖ ಭಾಗೀದಾರರು. ಅವರ ಆರ್ಥಿಕ ಸಂಕಷ್ಟ ನಿವಾರಣೆಗೆ, ಬಾಕಿ ಪಾವತಿಗಳಿಗಾಗಿ ಸರ್ಕಾರವು ವಿಶೇಷ ಸಹಾಯ ಪ್ಯಾಕೇಜ್ ಘೋಷಿಸಿ, ಎಲ್ಲಾ ಬಾಕಿ ಬಿಲ್‌ಗಳನ್ನು ಮಾರ್ಚ್ 31ರೊಳಗೆ ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು ಎಂದು ಜವಾಬ್ದಾರಿಯುತವಾಗಿ ಆಗ್ರಹಿಸಲಾಯಿತು.
- ಉಡುಪಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆದಾರರು ಭಾಗವಹಿಸಿ, ಶೀಘ್ರದಲ್ಲೇ ಪಾದಯಾತ್ರೆ ಮೂಲಕ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು.
- ಮಾರ್ಚ್ 6ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲೆಯ ಗುತ್ತಿಗೆದಾರರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು.
- ಸರ್ಕಾರವು ತಕ್ಷಣ ಬಾಕಿ ಪಾವತಿಗಳನ್ನು ಬಿಡುಗಡೆ ಮಾಡುವ ಕ್ರಮ ಕೈಗೊಂಡು, ಗುತ್ತಿಗೆದಾರರ ಆರ್ಥಿಕ ಸಂಕಷ್ಟಕ್ಕೆ ತುರ್ತು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಯಿತು.
ಸಭೆಯಲ್ಲಿ ಗುತ್ತಿಗೆದಾರರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಏಕತೆಯಿಂದ ಸಂಘಟನೆಯ ಶಕ್ತಿಯನ್ನು ಹೆಚ್ಚಿಸಬೇಕೆಂದು ಕರೆ ನೀಡಲಾಯಿತು.
ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಗುತ್ತಿಗೆದಾರರ ಹಕ್ಕುಗಳ ರಕ್ಷಣೆಗೆ ಹಂತ ಹಂತವಾಗಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
